ರವಿವರ್ಮ 2

1848-1908. ಸುಪ್ರಸಿದ್ಧ ತೈಲವರ್ಣ ಚಿತ್ರಕಾರ. ಭಾರತೀಯ ವರ್ಣಚಿತ್ರ ಕಲೆಗೆ ಒಂದು ಹೊಸ ತಿರುವು ನೀಡಿದವನು; ತೈಲವರ್ಣ ರಚನಾ ಪರಪಂರೆಗೆ ಕಾರಣನಾಗಿ ಹೊಸ ಮಾರ್ಗವನ್ನು ತೆರೆದವನು. ತಿರುವನಂತಪುರದ ಸಮೀಪದ ಕಿಳಿಮನೂರ್‍ನಲ್ಲಿ 29 ಏಪ್ರಿಲ್ 1848 ರಂದು ಜನಿಸಿದ. ಇವನ ತಂದೆ ಎಜುಮಾವಿಲ್ ನೀಲಕಂಠನ್ ಭಟ್ಟತಿರಿಪಾದ್; ತಾಯಿ ಉಮಾ ಅಂಬಾಬಾಯಿ ತಂಬುರಾಟ್ಟಿ. ತಂದೆ ಸಂಸ್ಕøತ ಮತ್ತು ವೇದಗಳಲ್ಲಿ ಪಾರಂಗತ, ತಾಯಿ ಒಳ್ಳೆಯ ಹಾಡುಗಾರ್ತಿ. ಇಂತಹ ಒಂದು ಪರಿಸರದಲ್ಲಿ ಹುಟ್ಟಿ ಬೆಳೆದ ರವಿವರ್ಮ ಸಹಜವಾಗಿಯೇ ಮಲಯಾಳಮ್ ಮತ್ತು ಸಂಸ್ಕøತಗಳನ್ನು ಮನೆಯಲ್ಲಿಯೇ ಕಲಿತ. ಐದುವರ್ಷಗಳ ಬಾಲಕನಾಗಿರುವಾಗಲೇ ಇವನಿಗೆ ಚಿತ್ರಕಲೆಯಲ್ಲಿ ಅತೀವ ಆಸಕ್ತಿ. ಪ್ರಸಿದ್ಧ ವರ್ಣಚಿತ್ರಕಾರನಾಗಿದ್ದ ಇವನ ಚಿಕ್ಕಪ್ಪ ರಾಜರಾಜವರ್ಮ ಬಾಲಕನಲ್ಲಿದ್ದ ಈ ಆಸಕ್ತಿಯನ್ನು ಗುರುತಿಸಿ ರೇಖಾಚಿತ್ರಗಳನ್ನು ಬರೆಯುವ ಬಗೆಗೆ ಮಾರ್ಗದರ್ಶನ ನೀಡಿದ. 
 	
ರವಿವರ್ಮನ ಕಾಲಕ್ಕೆ, ಚಿತ್ರಕಲೆಯೆಂದರೆ ದೇವಾಲಯಗಳ ಮತ್ತು ಅರಮನೆಗಳ ಗೋಡೆಗಳ ಮೇಲೆ ಕೆಲವು ಬಾರಿ ಗಾಜು ಮತ್ತು ದಂತಗಳ ಮೇಲೆ ದೇವತೆಗಳು ಹಾಗೂ ಪೌರಾಣಿಕ ವಸ್ತುಗಳ ದೃಶ್ಯಗಳನ್ನು ಚಿತ್ರಕಾರರು ಬಿಡಿಸುವುದಾಗಿತ್ತು. ಕಲಾವಿದರೇ ಸಸ್ಯ ಮತ್ತು ಖನಿಜಗಳಿಂದ ವರ್ಣಗಳನ್ನು ತಯಾರುಮಾಡಿಕೊಳ್ಳುತ್ತಿದ್ದರು. ಚಿತ್ರಕಲೆ ಕೇವಲ ಸಾಂಪ್ರದಾಯಿಕವಾಗಿ ವಂಶಪಾರಂಪರ್ಯವಾಗಿ ಮುಂದುವರಿಯುವ ಕಸಬಾಗಿತ್ತು. ಅಲ್ಲಿ ಸ್ವತಂತ್ರ ಪ್ರಯೋಗಶೀಲತೆಗೆ ಅವಕಾಶವಿರಲಿಲ್ಲ. ರವಿವರ್ಮನಿಗೆ ಹದಿಮೂರು ವರ್ಷಗಳಾಗಿದ್ದಾಗ, ಇವನ ಚಿಕ್ಕಪ್ಪ ರಾಜರಾಜವರ್ಮನ ಪ್ರಯತ್ನದಿಂದ, ರಾಜ ಅಯ್ಯಲಯಂ ತಿರುನಾಳ್‍ರ ಅರಮನೆಯಲ್ಲಿರಲು ಅವಕಾಶ ದೊರೆಯಿತು. ಅಲ್ಲಿ ಈತನಿಗೆ ಅರಮನೆಯ ಚಿತ್ರಕಾರರ ಕೌಶಲ್ಯವನ್ನು ಪರಿವೀಕ್ಷಿಸಲು, ಚಿತ್ರಗಳನ್ನು ಕುರಿತ ಅಭ್ಯಾಸಮಾಡಲು ಅವಕಾಶ ದೊರೆಯಿತು. ಪದ್ಮನಾಭಸ್ವಾಮಿ ದೇವಾಲಯದ ಭಿತ್ತಿಚಿತ್ರಗಳನ್ನು ಈತ ಅಭ್ಯಸಮಾಡಿದ. ಅಲ್ಲಿದ್ದ ಯುರೋಪಿನ ವರ್ಣಚಿತ್ರಗಳನ್ನು ಅದರಲ್ಲೂ ಇಟಲಿಯ ಪ್ರಸಿದ್ಧ ವರ್ಣಚಿತ್ರಕಾರರ ವರ್ಣಚಿತ್ರಗಳನ್ನು ನೋಡಿ ಗಾಢ ಪ್ರಭಾವಕ್ಕೊಳಗಾದ. ಈ ವರ್ಣಚಿತ್ರಗಳು ಅದುವರೆಗೆ ಈತ ನೋಡಿದ ಚಿತ್ರಗಳಿಗಿಂತ ಭಿನ್ನವಾಗಿದ್ದವು. ಎಡ್ವರ್ಡ್ ಮೂರ್‍ನ ದಿ ಹಿಂದು ಪ್ಯಾಂತಿಯನ್ ಎಂಬ ಕೃತಿಯಲ್ಲಿನ (ಸೂರ್ಯದೇವ ಸಪ್ತಾಶ್ವಗಳನ್ನು ಕಟ್ಟಿದ ರಥವನ್ನು ಓಡಿಸುತ್ತಿರುವುದು, ದೇವಕಿ-ಕೃಷ್ಣ ಇತ್ಯಾದಿ) ಅನೇಕ ಚಿತ್ರಗಳು ಇವನನ್ನು ಗಾಢವಾಗಿ ಆಕರ್ಷಿಸಿದವು. ಇಂಥ ಸಂದರ್ಭದಲ್ಲಿ ರವಿವರ್ಮ ಚಿತ್ರಕಲೆಯನ್ನು ಕುರಿತು ಗಂಭೀರ ಆಲೋಚನಾಪರನಾದ; ತೈಲವರ್ಣಗಳಲ್ಲಿ ಪ್ರಯೋಗನಿರತನಾದ. ಈತನಿಗೆ ತೈಲವರ್ಣಗಳಮಿಶ್ರಣದ ರಹಸ್ಯವನ್ನು ತಿಳಿಸಲು ಅರಮನೆಯ ಚಿತ್ರಕಾರ ರಾಮಸ್ವಾಮಿ ನಾಯ್ಕರ್ ನಿರಾಕರಿಸಿದಾಗ ಅದನ್ನು ತಿಳಿಯುವ ಬಗೆಗೆ ಇವನ ನಿರ್ಧಾರ ಮತ್ತಷ್ಟು ಗಟ್ಟಿಯಾಯಿತು. ಇಂಥ ಹೊತ್ತಿನಲ್ಲಿಯೇ ತನ್ನ 18ನೆಯ ವಯಸ್ಸಿನಲ್ಲಿ (1868) ಪುರೂರೂರಟ್ಟಿನಾಳ್ ತಂಬುರಾಟ್ಟಿ ಎಂಬಾಕೆಯನ್ನು ವಿವಾಹವಾದ.
 	
1868ರಲ್ಲಿ ಹಾಲೆಂಡಿನ ತಿಯೀಡರ್ ಜೆನ್‍ಸೀನ್ ಎಂಬ ಭಾವಚಿತ್ರ ರಚನಾಕಾರ ತಿರುವಾಂಕೂರಿಗೆ ಬಂದಿದ್ದ. ಆಗ ರವಿವರ್ಮನಿಗೆ ಆತ ಚಿತ್ರ ರಚಿಸುವುದನ್ನು ವೀಕ್ಷಿಸಲು ಅವಕಾಶ ದೊರಕಿತು. ಆತ ಯೂರೋಪಿನ ಶೈಲಿಯಲ್ಲಿ ರಚಿಸುತ್ತಿದ್ದ ಚಿತ್ರಗಳನ್ನು ರವಿವರ್ಮ ಸೂಕ್ಷ್ಮವಾಗಿ ಪರೀಕ್ಷಿಸುತ್ತಿದ್ದ. ತೈಲವರ್ಣಗಳನ್ನು ಮಿಶ್ರಮಾಡುವ ರಹಸ್ಯವನ್ನು ಮಾತ್ರ ಆತ ರವಿವರ್ಮನಿಗೆ ತಿಳಿಸಿಕೊಡಲಿಲ್ಲ. ಆದರೆ ಒಬ್ಬ ಪರಿಣಿತ ಚಿತ್ರಕಲಾವಿದನ ಕೆಲಸಗಳನ್ನು ಮುಖತಃ ಗಮನಿಸಿದ ಮಾನಸಿಕ ತೃಪ್ತಿ ಇವನಿಗೆ ದೊರೆಯಿತು. ಇಟಲಿಯ ಪುನರುಜ್ಜೀವನ ಕಾಲದ ಪರಿಣಿತ ವರ್ಣಚಿತ್ರಗಳ ಕಲಾವಿದರು ರಚಿಸಿರುವ (ಮುಖ್ಯವಾಗಿ ರೂಬೆನ್ಸ್, ರಾಫೆಲ್, ರೆಂಬ್ರಾಟ್ ಮೊದಲಾದವರ) ಚಿತ್ರಗಳನ್ನು ಗಾಢವಾಗಿ ಅಧ್ಯಯನ ಮಾಡುವುದರೊಂದಿಗೆ ಫ್ರೆಂಚ್ ವರ್ಣಚಿತ್ರ ಕಲಾವಿದರಾದ ಗಸ್ಟಾವ್, ಬ್ಲೂಲೆಂಗರ್ ಮೊದಲಾದವರ ವರ್ಣಚಿತ್ರಗಳನ್ನೂ ಅಧ್ಯಯನ ಮಾಡಿದ.
 	
ರವಿವರ್ಮನಿಗೆ ಕೇರಳವರ್ಮ ವಲಿಯಕೋಯಿ ತಂಬುರನ್ ಎಂಬಾತ ಒಂದು ಪೆಟ್ಟಿಗೆ ತೈಲವರ್ಣಗಳನ್ನು ತಂದುಕೊಟ್ಟ. ರವಿವರ್ಮನ ಸ್ವ-ಶಿಕ್ಷಣ ಒಂಬತ್ತು ವರ್ಷಗಳ ಕಾಲ ಮುಂದುವರಿಯಿತು. ಸ್ವತಃ ತೈಲವರ್ಣ ಮಿಶ್ರಣದ ತಂತ್ರವನ್ನು ಪ್ರಯೋಗಗಳ ಮೂಲಕ ಕಲಿತು ಅದರಲ್ಲಿ ಪರಿಣತನಾದ. ವಸ್ತುವನ್ನು ಯಥಾದೃಷ್ಟರೂಪಣ ಮಾಡುವ, ಸಮತಲದ ಮೇಲೆ ನಿರೂಪಿಸುವ ಕಲೆಯಲ್ಲಿ ಪರಿಣತಿ ಸಾಧಿಸಿದ. ಇಂಥ ತಂತ್ರವನ್ನು ರವಿವರ್ಮ ಪ್ರಥಮ ಬಾರಿಗೆ ಭಾರತೀಯ ಚಿತ್ರಕಲೆಯಲ್ಲಿ ತಂದ. ವಿವಿಧ ಪ್ರಯೋಗ ನಡೆಸುತ್ತಿದ್ದ ಈ ಅವಧಿಯಲ್ಲಿ ಇವನ ನಿಷ್ಠೆ, ದೈವದಲ್ಲಿ ಇವನ ನಂಬಿಕೆ-ಇವು ಇವನ ಕಾರ್ಯದಲ್ಲಿ ಮುಂದುವರಿಯಲು ಸಹಾಯಕವಾದವು. ಈ ಹಂತಕ್ಕೆ ತಲುಪಿದಾಗ ಇವನು ಗಾಢವಾಗಿ ಆಲೋಚಿಸಿ ವರ್ಣಚಿತ್ರ ರಚನೆಯನ್ನೇ ತನ್ನ ಜೀವಿತ ಕಸಬಾಗಿ ಸ್ವೀಕರಿಸಿದ.
 	
ರವಿವರ್ಮ ಮೊದಲನೆಯ ನಿಯೋಜಿತ ತೈಲವರ್ಣ ಚಿತ್ರವೆಂದರೆ ಕಲ್ಕತ್ತದ ಉಪನ್ಯಾಯಾಧೀಶರಾಗಿದ್ದ ಕಿಜಕ್ಕೆ ಪಲಾಟ್ ಕೃಷ್ಣಮೆನನ್ ಅವರ ಕುಟುಂಬದ ಚಿತ್ರಣ. ಇಲ್ಲಿಂದ ಮುಂದೆ ಈತನ ತೈಲವರ್ಣ ಚಿತ್ರಗಳ ರಚನೆ ನಿರಂತರವಾಗಿ ಸಾಗಿತು. ತನ್ನ ಪೋಷಕ ಪತ್ನಿಯ ವರ್ಣಚಿತ್ರಗಳನ್ನು ಬರೆದ; ಅಲ್ಲಿಂದ ಮುಂದೆ ಪ್ರಾಚೀನ ಮಹಾಕಾವ್ಯಗಳ ನಾಯಿಕೆಯರು, ಮಲಯಾಳಂನ ಮಣಿಪ್ರವಾಳ ಶೈಲಿಯಲ್ಲಿ ರಚನೆಗೊಂಡ ಕಾವ್ಯಗಳಲ್ಲಿ ವರ್ಣೀತರಾಗಿರುವ ಸ್ತ್ರೀಯರು, ಇವರುಗಳ ರೂಪಸಿರಿ, ಮೋಹಕತೆಗಳನ್ನು ವರ್ಣಚಿತ್ರಗಳಲ್ಲಿ ಹಿಡಿದಿಟ್ಟ. ಮಹಾಭಾರತ, ರಾಮಾಯಣ ಮಹಾಕಾವ್ಯಗಳಲ್ಲಿನ ಸಂದರ್ಭಗಳು, ವ್ಯಕ್ತಿಗಳನ್ನು ತನ್ನ ವರ್ಣಚಿತ್ರ ಕಲೆಯಲ್ಲಿ ಕುಂಚಿಸಿದ. ಇಲ್ಲಿಂದ ಮುಂದೆ ರವಿವರ್ಮನ ವರ್ಣಚಿತ್ರ ರಚನೆಯ ಕಥೆ ಯಶೋಗಾಥೆಯಾಯಿತು.
 	
ಮದರಾಸಿನಲ್ಲಿ ಗವರ್ನರ್ ಆಗಿದ್ದ ಲಾರ್ಡ್ ಹೋಬರ್ಟಟ ಪೋಷಕತ್ವದಲ್ಲಿ ಲಲಿತಕಲಾ ಪ್ರದರ್ಶನವೊಂದು 1873ರಲ್ಲಿ ನಡೆಯಿತು. ಅಲ್ಲಿ ಪ್ರದರ್ಶಿತವಾದ ರವಿವರ್ಮನ `ಎ ನಾಯರ್ ಲೇಡಿ ಅಟ್ ದಿ ಟಾಯ್‍ಲೆಟ್ ಚಿತ್ರಕ್ಕೆ ಪ್ರಥಮ ಬಹುಮಾನ ದೊರೆಯಿತು. 1874ರಲ್ಲಿ ಮದರಾಸಿನಲ್ಲಿ ನಡೆದ ಮತ್ತೊಂದು ಪ್ರದರ್ಶನದಲ್ಲಿ `ಎ ತಮಿಳ್ ಲೇಡಿ ಪ್ಲೇಯಿಂಗ್ ಸರಬತ್ ಚಿತ್ರಕ್ಕೆ ಗವರ್ನರಿನ ಚಿನ್ನ ಪದಕ ಲಭಿಸಿತು. ಇಲ್ಲಿಯೇ 1904ರಲ್ಲಿ ನಡೆದ ಚಿತ್ರಪ್ರದರ್ಶನದಲ್ಲೂ ಸೀಸ್ಟಾ (ಮಧ್ಯಾಹ್ನದ ವಿಶ್ರಾಂತಿ) ಎಂಬ ವರ್ಣಚಿತ್ರಕ್ಕೆ ಚಿನ್ನದಪದಕ ದೊರಕಿತು. 
 	
ಕಾಳಿದಾಸನ ಶಾಕುಂತಲಾ ನಾಟಕದ ಆಧಾರದ ಮೇಲೆ ರಚಿತವಾದ `ಶಕುಂತಲಾಸ್ ಲವ್ ಲೆಟರ್ ಟು ದುಷ್ಯಂತ ಎಂಬ ವರ್ಣಚಿತ್ರದಲ್ಲಿನ ವರ್ಣಸಂಯೋಜನಾ ಕೌಶಲ್ಯ ಅಪ್ರತಿತವಾದದ್ದೆಂದು 1886ರ ಮದರಾಸು ಕಲಾಪ್ರದರ್ಶನದಲ್ಲಿ ಪ್ರಶಂಸೆ ಪಡೆಯಿತು. ಶಾಕುಂತಲಾ ನಾಟಕವನ್ನು ಇಂಗ್ಲಿಷ್‍ಗೆ ಅನುವಾದಿಸಿದ ಪ್ರಕೃತಿಯನ್ನು ರವಿವರ್ಮನ ಅನುಮತಿಯೊಡನೆ ಬಳಸಿಕೊಂಡ. ಈ ವರ್ಣಚಿತ್ರ ರವಿವರ್ಮನಿಗೆ ಅಪಾರ ಖ್ಯಾತಿಯನ್ನು ತಂದುಕೊಟ್ಟಿತು.
 	
ಅನಂತರದ ಮೂರು ವರ್ಷಗಳು ರವಿವರ್ಮ ಭಾವಚಿತ್ರಗಳ ರಚನೆಯಲ್ಲಿ ತೊಡಗಿದ. 1878ರಲ್ಲಿ ಮದರಾಸಿನ ಗವರ್ನರ್ ಡ್ಯೂಕ್ ಆಫ್ ಬಕಿಂಗ್‍ಹ್ಯಾಂನ ಸಹಜಾಕೃತಿಯ (ಲೈಫ್‍ಸೈಜ್) ತೈಲವರ್ಣಚಿತ್ರ ರಚಿಸಲು ಆಹ್ವಾನ ದೊರಕಿ ಆ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಿದ.
	
ಅನಂತರದ ಈತನ ಸೀತಾ ಭೂಪ್ರವೇಶಂ ಎಂಬ ತೈಲವರ್ಣಚಿತ್ರ ರಚಿತವಾಯಿತು. ಈ ರಚನೆಯಲ್ಲಿ ರವಿವರ್ಮ ತೋರಿಸಿರುವ ವರ್ಣಸಂಯೋಜನಾಕೌಶಲ. ಭಾವಾಭಿವ್ಯಕ್ತಿ ಅದ್ವಿತೀಯವಾಗಿವೆ. ಪುಣೆಯ ಪ್ರದರ್ಶನವೊಂದರಲ್ಲಿ ಎ ನಾಯರ್ ಬ್ಯೂಟಿ ಎಂಬ ಚಿತ್ರಕ್ಕೆ ಗಾಯಕವಾಡ್ ಚಿನ್ನಪದಕ ಲಭಿಸಿತು. ಇದರಿಂದಾಗಿ ಉತ್ತರ ಭಾರತದಲ್ಲೂ ರವಿವರ್ಮನ ಕೀರ್ತಿ ಹಬ್ಬಲು ಕಾರಣವಾಯಿತು. 1881ರಲ್ಲಿ ಸಯ್ಯಾಜಿರಾವ್‍ನು `ಗಾಯಕ್‍ವಾಡ್ ಆಫ್ ಬರೋಡ್ ಆಗಿ ಅಧಿಕಾರ ಸ್ವೀಕರಿಸಿದಾಗ ಆ ಸಮಾರಂಭಕ್ಕೆ ರವಿವರ್ಮನನ್ನು ಆಹ್ವಾನಿಸಲಾಗಿತ್ತು. ನಾಲ್ಕು ವರ್ಷಗಳ ಕಾಲ ಈತ ಬರೋಡದಲ್ಲಿದ್ದ. ಅಲ್ಲಿ ಗಾಯಕವಾಡ್ ಮತ್ತು ಅವನ ಮಹಾರಾಣಿಯರ ಭಾವಚಿತ್ರಗಳನ್ನು ಬಿಡಿಸಿದ. ಮಹಾಲಕ್ಷ್ಮಿ, ಸರಸ್ವತಿ, ನಳದಮಯಂತಿ, ಸೈರಂಧ್ರಿ, ಸೀತಾಸಿದ್ಧಿ- ಈ ತೈಲವರ್ಣ ಚಿತ್ರಗಳನ್ನು ನಿಯೋಜನೆಯ ಮೇರೆಗೆ ರಚಿಸಿದ.
 	
1885ರಲ್ಲಿ ರವಿವರ್ಮ ಮತ್ತು ಇವನ ಸಹೋದರ ಮೈಸೂರಿನ ಚಾಮರಾಜ ಪಡೆಯರ ಆಹ್ವಾನದ ಮೇರೆಗೆ ಮೈಸೂರಿಗೆ ಬಂದರು. ಇಲ್ಲಿ ಮಹಾರಾಜರ ಮತ್ತು ಕುಟುಂಬದವರ ಸಹಜಾಕೃತಿಯ ಅನೇಕ ಭಾವಚಿತ್ರಗಳನ್ನು ರವಿವರ್ಮ ರಚಿಸಿದ. ಹಾಡುತ್ತಿರುವ ಜಿಪ್ಸಿ ಹೆಣ್ಣು, ನಲ್ಲಿಯ ಬಳಿ ಹುಡುಗಿ, ಕ್ಷೌರಿಕ, ರಾಜ ಮೆರವಣಿಗೆ, ದೇವಾಲಯದ ಮೆಟ್ಟಿಲುಗಳು, ನರ್ತಕರು, ಒಂಟೆ ಸವಾರ, ಕಾವಲಿರುವ ಸೈನಿಕ, ಮುಸ್ಲಿಮರು ಪ್ರಾರ್ಥನೆಯಲ್ಲಿ ತೊಡಗಿರುವುದು, ಸಿತಾರ್ ನುಡಿಸುತ್ತಿರುವ ಸಂಗೀತಗಾರ, ಉದ್ಯಾನವನದಲ್ಲಿ ಕಲ್ಲುಬೆಂಚುಗಳಮೇಲೆ ಕುಳಿತಿರುವ ಪ್ರಣಯಿಗಳು, ಶಿವಾಜಿ, ರಾಣಪ್ರತಾಪ ಇತ್ಯಾದಿ ಅನೇಕ ಚಿತ್ರಗಳು 1884-94ರ ಅವಧಿಯಲ್ಲಿ ರಚನೆಗೊಂಡವು. ಇದೇ ಕಾಲದಲ್ಲಿ ಇವನಿಂದ ರಚನೆಗೊಂಡ ವ್ಯಕ್ತಿಚಿತ್ರಗಳೆಂದರೆ ರಾಣಿ ಲಕ್ಷ್ಮಿಬಾಯಿ, ಕೇರಳವರ್ಮ, ಥಾಮ್‍ಸನ್, ಪ್ರೆಸಿಡೆನ್ಸಿಕಾಲೇಜಿನ ಪ್ರಾಂಶುಪಾಲರು ಮೊದಲಾದವು. ತಿರುವಾಂಕೂರಿನಲ್ಲಿ ಶ್ರೀ ಚಿತ್ರಾ ಆರ್ಟ್‍ಗ್ಯಾಲರಿ ಆರಂಭವಾಗಲು ರವಿವರ್ಮನೇ ಕಾರಣ. ಇಲ್ಲಿ ಇವನ ಐದು ಚಿತ್ರಗಳಿವೆ. ರವಿವರ್ಮ ತನ್ನ ಸಹೋದರನೊಡನೆ ದೆಹಲಿ, ಔದ್, ಲಾಹೋರ್, ಆಗ್ರ, ಮಧುರೈ. ಶ್ರೀರಂಗ ಮೊದಲಾದ ಸ್ಥಳಗಳಿಗೆ ಪ್ರವಾಸ ಮಾಡಿ ಚಿತ್ರಕಲೆಯ ಬಗ್ಗೆ ಅನೇಕ ಟಿಪ್ಪಣೆಗಳನ್ನು ಸಿದ್ಧಪಡಿಸಿಕೊಂಡಿದ್ದ.
 	
ನಳದಮಯಂತಿ, ಶಂತನು ಮತ್ತು ಗಂಗೆ, ದೇವಕಿ ಮತ್ತು ಕೃಷ್ಣ-ಇವು ರವಿವರ್ಮನ ಪ್ರಸಿದ್ಧ ವರ್ಣಚಿತ್ರಗಳು. ಈತನ ಲಕ್ಷ್ಮೀ ಹಾಗೂ ಸರಸ್ವತಿಯರ ಚಿತ್ರಗಳ ಪ್ರತಿಕೃತಿಗಳು ಎಲ್ಲ ಭಾರತೀಯರ ಮನೆಗಳನ್ನು ಅಲಂಕರಿಸಿದ್ದವು. ಬರೋಡದ ರಿಜೆಂಟ್ ಆಗಿ ನಿಧನ ಹೊಂದಿದ ಟಿ. ಮಾಧವನಾಯರ್ ಅವರ ಸಲಹೆಯಂತೆ ರವಿವರ್ಮ ತನ್ನ ಚಿತ್ರಗಳ ಪ್ರತಿಕೃತಿಗಳನ್ನು ತಯಾರಿಸಲು ಜರ್ಮನಿಯಿಂದ ಅಚ್ಚಿನ ಯಂತ್ರವನ್ನು ತರಿಸಿ ಅದನ್ನು ಮುಂಬಯಿನಲ್ಲಿ ಸ್ಥಾಪಿಸಿದ. ಇದರಿಂದಾಗಿ ಇವನ ಚಿತ್ರಗಳ ಅಸಂಖ್ಯಾತ ಪ್ರತಿಕೃತಿಗಳು ತಯಾರಾಗಿ ದೇಶದ ಎಲ್ಲೆಡೆ ದೊರೆಯುವಂತಾಯಿತು.
 
	1892-93ರ ಅವಧಿಯಲ್ಲಿ ಚಿಕಾಗೊದಲ್ಲಿ ನಡೆದ ಅಂತಾರಾಷ್ಟ್ರೀಯ ಚಿತ್ರಪ್ರದರ್ಶನದಲ್ಲಿ ಇವನ ಮಲಬಾರ್ ಬ್ಯೂಟಿ, ಬೇಗಂ ಅಟ್ ದಿ ಬಾತ್, ಎಕ್ಸ್‍ಪೆಕ್ಟೇಷನ್, ಜಿಪ್ಸೀಸ್ ಆಫ್ ಸೌತ್ ಇಂಡಿಯಾ, ದಿ ಬಾಂಬೆ ಸಿಂಗರ್ ಇತ್ಯಾದಿ ಹಲವು ಚಿತ್ರಗಳು ಕಲಾರಸಿಕರ, ಕಲಾವಿದರ ಮೆಚ್ಚುಗೆ ಗಳಿಸಿದವು.
 

	ಭಾರತೀಯ ವರ್ಣಚಿತ್ರಕಲೆಯ ಇತಿಹಾಸದಲ್ಲಿ ರವಿವರ್ಮನಷ್ಟು ಕೀರ್ತಿಗಳಿಸಿದ ವರ್ಣಚಿತ್ರಕಾರ ಇನ್ನೊಬ್ಬನಿಲ್ಲ. 1904ರಲ್ಲಿ ಇವನಿಗೆ ಕೈಸರ್-ಎ-ಹಿಂದ್ ಪ್ರಶಸ್ತಿ ದೊರೆಯಿತು. ಇದೇವರ್ಷ ಈತ ಮತ್ತೆ ಮೈಸೂರಿಗೆ ತನ್ನ ಸಹೋದರನೊಂದಿಗೆ ಬಂದು ಮೈಸೂರು ಒಡೆಯರಾಗಿ ಜಗನ್ಮೋಹನ ಅರಮನೆಯಲ್ಲಿ ಅನೇಕ ವರ್ಣಚಿತ್ರಗಳನ್ನು ಚಿತ್ರಿಸಿದ. ಇವುಗಳಲ್ಲಿ ಮುಖ್ಯವಾದವು : ಶ್ರೀರಾಮ ಬ್ರೇಕ್ಸ್ ದಿ ಬೊ, ಸೇತುಬಂಧನ, ಕೃಷ್ಣ ಆ್ಯಸ್ ಎನ್‍ವಾಯ್.

 ರವಿವರ್ಮ 1906ರ ಅಕ್ಟೊಬರ್ 2 ರಂದು ತಿರುವಾಂಕೂರಿನಲ್ಲಿ ನಿಧನಹೊಂದಿದ. ಇವನ ಸಾವಿನೊಂದಿಗೆ ಆಧುನಿಕ ಭಾರತೀಯ ತೈಲವರ್ಣ ಚಿತ್ರಕಲೆಯ ಒಂದು ಅಧ್ಯಾಯ ಮುಗಿದಂತಾಯಿತು. ಪ್ರಸಿದ್ಧ ಕಲಾವಿದರೂ ಕಲಾವಿಮರ್ಶಕರೂ ರವಿವರ್ಮನ ಕಲಾಸಿದ್ಧಿಯನ್ನೂ ವಿಮರ್ಶಿಸಿದ್ದಾರೆ, ಹಾಡಿ ಹೊಗಳಿದ್ದಾರೆ. `ಈಗಿನ ದಿನಗಳಲ್ಲಿ ಅವನಂತಹ ವ್ಯಕ್ತಿಗಳನ್ನು, ಅವನಂತಹ ಕಲಾವಿದರನ್ನು, ಅವನಂತೆ ಭಾರತವನ್ನು ಪ್ರೀತಿಸಿದವರನ್ನು ಕಾಣುವುದು ಅಪರೂಪ ಎಂಬುದು ಅಬನೀಂದ್ರನಾಥ ಟಾಗೂರ್ ಅವರ ಅಭಿಪ್ರಾಯ. ಪಿ.ಆರ್. ರಾಮಚಂದ್ರರಾವ್, ಆನಂದಕುಮಾರಸ್ವಾಮಿ ಮೊದಲಾದವರು ರವಿವರ್ಮನ ಚಿತ್ರಕಲೆಯಲ್ಲಿರುವ ಇತಿಮಿತಿಗಳನ್ನು ಕುರಿತು ಬರೆದಿದ್ದಾರೆ. ರವಿವರ್ಮ ಭಾರತೀಯ ಚಿತ್ರಕಲೆಯನ್ನು ಆಧುನಿಕಗೊಳಿಸುವ ಪ್ರಕ್ರಿಯೆಯಲ್ಲಿ ಏಕಾಂಗಿಯಾಗಿ ನಿಂತು ಹೋರಾಡುತ್ತಲೇ ಹೊಸತನವನ್ನು ಸೃಷ್ಟಿಸಿದವನು. ಸಾಹಸಿಗಳಿಗಿರುವ ಅನುಕೂಲ ಅನಾನುಕೂಲಗಳೆರಡೂ ರವಿವರ್ಮನಿಗಿದ್ದವು ಎಂಬುದನ್ನು ಗಮನಿಸಿದರೆ, ಇವನ ಸಾಧನೆ ಮತ್ತು ಸಿದ್ಧಿಗಳು ಅದ್ವಿತೀಯ ಎಂಬುದು ಅರಿವಾಗುತ್ತದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ